ಜಯಂಗೊಂಡಾರ್ -
	ತಮಿಳಿನ 96 ಪ್ರಬಂಧ ಕಾವ್ಯಗಳಲ್ಲೊಂದಾದ ಕಳಿಂಗತ್ತುಪರಣಿಯೆಂಬ ಕಾವ್ಯದ ಕರ್ತೃ. ಕಾಲ ಕ್ರಿ.ಶ. 11ನೆಯ ಶತಮಾನ. ಈತ ಹುಟ್ಟಿದ್ದು ತಂಜಾವೂರು ಜಿಲ್ಲೆಯ ನನ್ನಿಲಂ ತಾಲ್ಲೂಕಿನ ದೀಪಂಕುಡಿ ಗ್ರಾಮದಲ್ಲಿ. ಅಂದಿಗೆ ಅದು ಚೋಳನಾಡಿಗೆ ಸೇರಿತ್ತು. ಈತನ ವಂಶ ಹಾಗೂ ಜೀವನದ ಬಗ್ಗೆ ಇದುವರೆಗೆ ಏನೂ ಖಚಿತವಾಗಿ ತಿಳಿದುಬಂದಿಲ್ಲ.

	ಜಯಂಗೊಂಡಾರ್ ಮೊದಲ ಕುಲೋತ್ತುಂಗ ಚೋಳನ ಆಸ್ಥಾನ ಕವಿಯಾಗಿದ್ದು ತನ್ನ ದೊರೆ ಕಳಿಂಗದ ಮೇಲೆ ಯುದ್ಧ ಮಾಡಿ ಗೆದ್ದ ವಿಷಯವನ್ನು ತನ್ನ ಕಾವ್ಯದಲ್ಲಿ ಬಣ್ಣಿಸಿದ್ದಾನೆ. ಪರಣಿಯೆಂದರೆ ಯುದ್ಧದಲ್ಲಿ ಸಾವಿರ ಆನೆಗಳನ್ನು ಗೆದ್ದು ಬಂದವನ ಯಶಸ್ಸನ್ನು ಹೊಗಳುವುದು. ಪರಣಿಯನ್ನು ಕೇಳಿದ ಅರಸ ಒಂದೊಂದು ಹಾಡಿಗೂ ಒಂದೊಂದು ಬಂಗಾರದ ತೆಂಗಿನಕಾಯನ್ನು ಕವಿಗೆ ಬಹುಮಾನವಾಗಿತ್ತನಂತೆ. ಪರಣಿ ಸಾಹಿತ್ಯಪ್ರಕಾರಕ್ಕೆ ತಮಿಳಿನಲ್ಲಿ ಮೊದಲು ಎಡೆಮಾಡಿಕೊಟ್ಟವನು ಈ ಕವಿಯೇ ಎಂದು ಹೇಳಲಾಗಿದೆ.

	ಕಳಿಂಗತ್ತುಪರಣಿಯಲ್ಲಿ ಹದಿಮೂರು ಭಾಗಗಳಿವೆ. ಕಾವ್ಯದಲ್ಲಿ ಉದ್ದಕ್ಕೂ ಕವಿಯ ಸುಂದರ ಕಲ್ಪನೆಗಳು, ಮಧುರ ಪ್ರೇಮ, ಶೌರ್ಯ ಸಾಹಸಗಳ ವರ್ಣನೆಗಳು ವಿಪುಲವಾಗಿ ಬರುತ್ತವೆ. ಇದರಲ್ಲಿ ಸಾಮಾನ್ಯವಾಗಿ ಚೋಳ ಅರಸರ ಚರಿತ್ರೆಯನ್ನೂ ಅದರಲ್ಲೂ ಮುಖ್ಯವಾಗಿ ಕುಲೋತ್ತುಂಗ ಚೋಳನ ಚರಿತ್ರೆಯನ್ನು ಹೇಳಿರುವುದರಿಂದ ಇತಿಹಾಸಜ್ಞರಿಗೂ ಈ ಗ್ರಂಥ ತುಂಬ ಉಪಯೋಗಕರವಾಗಿದೆ.										(ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ